ಕ್ರೋನಿನ್, ಆರ್ಚಿಬಲ್ಡ್ ಜೋಸೆಫ್	

 1896-. ಆಂಗ್ಲ ಕಾದಂಬರಿಕಾರ. ಡಂಬರ್‍ಟನ್‍ಷೈರ್‍ನ ಕಾರ್‍ಡ್ರಾಸ್‍ನಲ್ಲಿ ಹುಟ್ಟಿದ. ಡಂಬರ್‍ಟನ್ ಅಕಾಡಮಿ ಮತ್ತು ಗ್ಲಾಸ್ಗೋ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ನಡೆಸಿ ವೈದ್ಯಪದವಿ ಪಡೆದ. ಅನೇಕ ಆಸ್ಪತ್ರೆಗಳಲ್ಲಿ ವೈದ್ಯನಾಗಿದ್ದು, 1921ರಲ್ಲಿ ಆಜ್ಞೆಸ್ ಮೇರಿ ಗಿಬ್ಸನ್ ಎಂಬ ವೈದ್ಯಳನ್ನು ಮದುವೆಯಾಗಿ ಸೌತ್‍ವೇಲ್ಸ್‍ನಲ್ಲಿ ಸ್ವತಂತ್ರವಾಗಿ ಆಸ್ಪತ್ರೆ ಆರಂಭಿಸಿದ. ಅನಂತರ ಲಂಡನ್ನಿಗೆ ಬಂದ. 1930ರಲ್ಲಿ ಕಾಯಿಲೆ ಬಿದ್ದು ಚೇತರಿಸಿಕೊಳ್ಳುವಾಗ ಕೇವಲ ಮೂರು ತಿಂಗಳ ಅವಧಿಯಲ್ಲಿ ಹ್ಯಾಟರ್ಸ್ ಕ್ಯಾಸಲ್ ಎಂಬ ಕಾದಂಬರಿಯನ್ನು ಬರೆದ. ಈ ಕಾದಂಬರಿ ಬಹು ಜನಪ್ರಿಯವೆನಿಸಿ 5 ಭಾಷೆಗಳಿಗೆ ತರ್ಜುಮೆಯಾಯಿತು. ಈ ಯಶಸ್ಸಿನ ಫಲವಾಗಿ ಕ್ರೋನಿನ್ ವೈದ್ಯಕೀಯ ವೃತ್ತಿಯನ್ನು ತೊರೆದು ಸಾಹಿತ್ಯ ಸೃಷ್ಟಿಗೆ ಧುಮುಕಿದ. ತ್ರೀ ಲೌವ್ಸ್ (1932), ಗ್ರ್ಯಾಂಡ್ ಕನೇರಿ (1933), ದಿ ಸ್ಟಾರ್ಸ್ ಲುಕ್ ಡೌನ್(1935), ದಿ ಸಿಟಡೆಲ್ (1937), ದಿ ಕಿಸ್ ಆಫ್ ದಿ ಕಿಂಗ್‍ಡಮ್ (1942), ದಿ ಗ್ರೀನ್ ಯಿಯರ್ಸ್ (1944), ಷ್ಯಾನನ್ಸ್ ವೇ (1948), ದಿ ಸ್ಪ್ಯಾನಿಷ್ ಗಾರ್ಡನರ್ (1950), ಕ್ರುಸೆಡರ್ಸ್ ಟೊಂಬ್(1956)-ಇವು ಈತನ ಇತರ ಕಾದಂಬರಿಗಳು. ಆದರೆ ಇವು ಯಾವುವೂ ಮೊದಲಿನ ಕಾದಂಬರಿಯಷ್ಟು ಜನಪ್ರಿಯವಾಗಲಿಲ್ಲ. ಈತ ಜ್ಯೂಪಿಟರ್ ಲಾಫ್ಸ್ (1940) ಎಂಬ ನಾಟಕವನ್ನು ಬರೆದಿದ್ದಾನೆ. ಈತ ಶಕ್ತಿವಂತ ಮತ್ತು ವಾಸ್ತವಿಕ ಪ್ರಜ್ಞೆಯುಳ್ಳ ಕಾದಂಬರಿಕಾರನಾದರೂ ಉದಾರ ಪ್ರವೃತ್ತಿಯವ. 										       (ಹೆಚ್.ವಿ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ